ರಂಗರಾವ್, ಎಸ್ ವಿ
1918 - 74. ಪ್ರಸಿದ್ಧ ತೆಲುಗು ಚಿತ್ರನಟರು. 1918 ರಲ್ಲಿ ಆಂಧ್ರಪ್ರದೇಶದ ನುಜಿವಾಡು ಎಂಬಲ್ಲಿ ಜನಿಸಿದ. ರಂಗರಾವ್ ಸಮರ್ಲ ವೆಂಕಟ ಎಂಬುದು ಇವರ ಪೂರ್ಣ ಹೆಸರು. ಮದರಾಸಿನಲ್ಲಿ ವ್ಯಾಸಂಗ ಮಾಡಲು ಆರಂಭಿಸಿದ ಇವರು ಅನಂತರ ವಿಶಾಖಪಟ್ಟಣಂ ಮತ್ತು ಕಾಕಿನಾಡಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಕಾಕಿನಾಡದಲ್ಲಿದ್ದ ಸಮಯದಲ್ಲಿ ಕಾಕಿನಾಡ ಯಂಗ್‍ಮೆನ್ಸ್ ಹ್ಯಾಪಿ ಕ್ಲಬ್‍ನ ವತಿಯಿಂದ ನಡೆಯುತ್ತಿದ್ದ ಷೇಕ್‍ಸ್ಪಿಯರನ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಕೆಲಕಾಲ ಅಗ್ನಿಶಾಮಕದಳದಲ್ಲಿ ಇನ್‍ಸ್ಪೆಕ್ಟರ್ ಹುದ್ದೆಯಲ್ಲೂ ಕೆಲಸ ಮಾಡಿದರು. ಸಿನಿಮಾ ರಂಗದಲ್ಲಿ ಭದ್ರತೆ ಸಿಗುವ ತನಕ ಈ ಉದ್ಯೋಗದಲ್ಲಿಯೇ ಮುಂದುವರೆದರು. `ವರುದಿನಿ (1946) ಇವನ ಅಭಿನಯದ ಮೊದಲ ಚಿತ್ರ. ಸಾವುಕಾರು (1950) ಎಂಬ ಚಿತ್ರದ ಅನಂತರ ಇವರು ಸಿನಿಮಾ ಕ್ಷೇತ್ರದಲ್ಲಿ ಖಾಯಂ ನೆಲೆಕಂಡುಕೊಂಡರು. ವಿಜಯಸ್ಟುಡಿಯೋ ಪ್ರೊಡಕ್ಷನ್ನಿನಲ್ಲಿ ತಯಾರಾದ ಬಹುಪಾಲು ಸಿನಿಮಾಗಳಿಗೆ ಇವರು ಖಾಯಂ ನಟನಾದರು. ಈ ಸಂಸ್ಥೆಯ ಬಹುಪಾಲು ಸಿನಿಮಾಗಳು ದ್ವಿಭಾಷೆಯಲ್ಲಿ ತಯಾರಾಗುತ್ತಿದ್ದವು. ಹೀಗಾಗಿ ರಂಗ್‍ರಾವ್ ತಮಿಳು ಸಿನಿಮಾ ರಂಗದಲ್ಲೂ ಕಾಣಿಸಿಕೊಳ್ಳಲು (ಪಾತಾಳ ಭೈರವಿ) ಸಹಾಯಕವಾಯಿತು. ಭಾವೋದ್ವೇಗದ ಪಾತ್ರಗಳಲ್ಲಿ ಹೆಚ್ಚು ಆಕರ್ಷಕವಾಗಿ ನಟಿಸುತ್ತಿದ್ದರು, ನರ್ತನಶಾಲ ಮತ್ತು ಕೊಲೈನ ಕೀಚಕನ ಪಾತ್ರಗಳಲ್ಲಿ ಇವರು ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಬಂಗಾರುಪಾಪ ಚಿತ್ರದ ಪಾತ್ರದಿಂದಾಗಿ ಇವರ ಹೆಚ್ಚು ಪ್ರಖ್ಯಾತರಾದರು. ಈ ಪಾತ್ರದಲ್ಲಿನ ಇವರ ಅಭಿನಯಕ್ಕೆ ಎಲ್ಲ ಕಡೆಯಿಂದ ಉತ್ತಮ ವಿಮರ್ಶೆಯೂ ದೊರಕಿತು.

	ಪಾತಾಳ ಭೈರವಿ (1931), ಪೆಳ್ಳಿಚೇಸಿಚೂಡು (1932), ಇದರ ತಮಿಳು ರೂಪ ಕಲ್ಯಾಣಂ ಪಣ್ಣಿಪಾರ್, ದಾಸಿ (1952), ಪಲ್ಲೆಟೂರು (1952), ಚಂದಿರಾನಿ (1953), ದೇವದಾಸು (1953), ಪೂಂಗೊತೈ (1953, ಇದರ ತಮಿಳು ರೂಪ ಪರ್‍ದೇಸಿ), ಪೆಂಪುಡು ಕೊಡಕು (1953), ಚಂದ್ರಹಾರಂ (1953), ಅಂಮನವಾಳ್ಳೆ (1954), ಬಂಗಾರು ಪಾಪ (1954), ಅರ್ಧಾಂಗಿ (1955), ಇದರ ತಮಿಳು ರೂಪ ಪೆಣ್ಣಿನ್ ಪೆರುಮೈ, ದೊಂಗರಾಮುಡು (1955), ಚಿಂಟಮನಿ (1930), ಮಾಯಾಬಜಾರ್ (1957), ಭೂಕೈಲಾಸ (1958), ಚೆಂಚುಲಕ್ಷ್ಮಿ (1958) ಅಪ್ಪುಚೇಸಿ ಪಪ್ಪುಕೋಡು (1958), ಇದರ ತಮಿಳು ರೂಪ ಕಡವಾಂಗಿ ಕಲ್ಯಾಣಂ), ಗುಂಡಮ್ಮ ಕಥಾ (1962), ಇರುವರ್ ಉಳ್ಳಮ್ (1963), ಮುರುಳಿ ಕೃಷ್ಣ (1964), ಪಾಂಡವ ವನವಾಸಂ (1965) ಭಲೆ ಕೋಡಾಲು (1967), ನಮ್‍ನಾಡು (1969), ತಾತಾ ಮನುವುಡು 91972), ಪಂಡಂಟಿಕಾಪುರಂ (1972) ಹೀಗೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇವರ ಬಹುಪಾಲು ಚಿತ್ರಗಳು ಅಭಿನಯ ದೃಷ್ಟಿಯಿಂದಲೂ ಯಶಸ್ಸಿನ ದೃಷ್ಟಿಯಿಂದಲೂ ಉನ್ನತವಾಗಿವೆ. ಇವರು ತಮ್ಮ ಜೀವಿತದ ಕಡೆಗಾಲದವರೆಗೆ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, 1974ರಲ್ಲಿ ನಿಧನ ಹೊಂದಿದರು. ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ